ಕಾಲ ನುಂಗಿ ನೀರು ಕುಡಿತಲ್ಲ
ಎದೆಯ ಗೂಡಿನ ಒಳಗೆ ಉಸಿರು ಸಿಕ್ಕಿತ್ತು
ಸುಮ್ಮನೆ ನೋವಿಗೆ ಎದೆಯು ಗಡಗಡ ಕಂಪಿಸಿತ್ತು
ಕಣ್ಣ ಹನಿಯು ರಕ್ತದ ಕಂಬನಿ ಸುರಿಸಿತ್ತು
ಮಾತು ಮೌನದ ಬದುಕಿನ ಕವನ ಬರೆದಿತ್ತು
ನೋಡುತ ನೋಡುತ ಕಾಲ ಕಾಲನ್ನು ಎಳೆದಿತ್ತು
ಬದುಕಿನ ದಾರಿಯಲ್ಲಿ ಪಯಣ ಬೇಸರ ತಂದಿತ್ತು
ಸಮಾಜ ಕಲಿಸಿದ ಪಾಠ ಕಲಿಯಲೇ ಬೇಕಿತ್ತು
ಮುದ್ದಾದ ಹೂವಂದು ಸುಮ್ಮನೆ ಅಳುತ್ತಿತ್ತು
ಜೀವನ ಹುಡುಕುವ ಒಳಗೆ ಕತ್ತಲೆ ಮೋಡ ಕವಿದಿತ್ತು
ಯಾರು ನನ್ನವರು ಎಂದು ದುಃಖದೀ ಹೂವು ಕೇಳಿತ್ತು
ಹಾರಿದ ಹಣತೆ ಮತ್ತೆ ಒತ್ತಿ ಉರಿಯಲು ಬಯಸಿತ್ತು
ಹಚ್ಚಿದ ಹಣತೆ ಬೆಳಕಲ್ಲಿ ಸೂತಕದ ಮೌನ ಆಡಗಿತ್ತು
ಬಾಳಿನ ದಾರಿಯಲ್ಲಿ ಹೂವು ನಲುಗಿ ಬಾಡಿ ಹೋಗಿತ್ತು
ಬಾಡಿದ ಹೂವು ದೈವಕ್ಕೂ, ಸಾವಿಗೂ ಬೇಡವಾಗಿತ್ತು
ಮಣ್ಣಾಲಿ ಮಣ್ಣಾಗಿ ಸತ್ತ ದೇಹದ ಜೊತೆ ಹೂವು ಸತ್ತಿತ್ತು
ಕನಸು ಕೈಗೂಡ ಬಿಡದೆ ಈ ಸಮಾಜವು ಮೋಸ ಮಾಡಿತ್ತು
ಹುಟ್ಟು ಸ್ವತಂತ್ರವಾಗಲಿಲ್ಲ ಸಾವು ಸ್ವತಂತ್ರವಾಗಲಿಲ್ಲ
ಕಾಲವು ಎಲ್ಲವನ್ನು ನುಂಗಿ ನೀರು ಕುಡಿಯುತಲ್ಲ
ಮನವು ಕಾಣದ ವಿಧಿಯ ನೋವಲಿ ಬಿಡದೆ ಶಪಿಸಿತ್ತು
ಮಾತು ಮೌನದ ಮೂಕ ಕಥೆಯ ಕವನ ಬರೆದಿತ್ತು
ಎದೆಯ ಗೂಡಿನ ಒಳಗೆ ಉಸಿರು ಸಿಕ್ಕಿತ್ತು
ಸುಮ್ಮನೆ ನೋವಿಗೆ ಎದೆಯು ಗಡಗಡ ಕಂಪಿಸಿತ್ತು
ಕಣ್ಣ ಹನಿಯು ರಕ್ತದ ಕಂಬನಿ ಸುರಿಸಿತ್ತು
ಮಾತು ಮೌನದ ಬದುಕಿನ ಕೊನೆಯ ಕವನ ಬರೆದಿತ್ತು
***********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Comments
Post a Comment