ಧ್ಯಾನದಿಂದ ಮನಸ್ಸಿಗೆ ಶಕ್ತಿ

 




ಜೀವನದ ಸಂತೋಷ ಮನುಷ್ಯನ ನಿರಂತರ ಪ್ರಯತ್ನವಾಗಿದೆ, ಮನುಷ್ಯ ಜೀವಿಯು ಯಾವಾಗಲೂ ದುಃಖವನ್ನು ಮರೆತು ಸಂತೋಷವಾಗಿರಲು ಪ್ರಯತ್ನಿಸುತ್ತಾನೆ. ಮನುಷ್ಯ ಒಬ್ಬ ಆಶಾ ಜೀವಿ, ಅವನು ಪಡುವ ಆಸೆಗಳು ಅವನನ್ನು ದುಃಖಕ್ಕೆ ದೂಡಿ ನಿರಾಶನನ್ನಾಗಿ ಮಾಡಿ, ಮನಸ್ಸು ಪ್ರತಿಯೊಬ್ಬ ವ್ಯಕ್ತಿಯನ್ನು ಚಕ್ರವರ್ತಿಯಂತೆ ಆಳಲು ಶುರುಮಾಡುತ್ತದೆ. ಇಂತಹ ಮನಸ್ಸಿನ ಮೇಲೆ ನಾವು ಹಿಡಿತ ಸಾಧಿಸಲು ಅಷ್ಟು ಸುಲಭವಾಗಿ ಸಾಧ್ಯವಿಲ್ಲ. ಮನಸ್ಸು ಒಂದು ರಹಸ್ಯ ಶಕ್ತಿ, ಅದು ನಮ್ಮನ್ನು ದೇವರಿಂದ ಬೇರ್ಪಡಿಸಿರುತ್ತದೆ, ಮನಸ್ಸು ಒಂದು ಆತ್ಮಶಕ್ತಿ, ಮನಸ್ಸಿನಿಂದ ನಾವು ಬ್ರಹ್ಮನು ಸ್ವರೂಪವನ್ನು ಕಾಣಬಹುದು. ಹೃದಯವೇ ಮನಸ್ಸಿನ ಆಸನವಾಗಿದೆ.

ಕುಣಿಯುವ ಕುದುರೆಗೆ ಲಗಾಮು ಹಾಕು

ತಿವಿಯುವ ಏತ್ತಿಗೆ ಮೂಗುದಾರ ಹಾಕು

ಹೊಲವ ಮೇಯುವ ಆನೆಗೆ ಬೇಲಿ ಹಾಕು

ಹುಚ್ಚು ಮನಸನು ಹಿಡಿದಿಡು ಸಾಕು


ನಮ್ಮ ಮನಸ್ಸು ಬೇರೊಬ್ಬ ವ್ಯಕ್ತಿಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿರುತ್ತದೆ, ಸ್ನೇಹಿತರು , ಸಂಬಂಧಿಕರು, ಇಷ್ಟಪಟ್ಟ ವಸ್ತುಗಳು ಹಾಗೂ ಇತರ ಮನಸ್ಸುಗಳೊಂದಿಗೆ. ನಾನು ಎಂಬ ಅಹಂಕಾರ ಮನಸ್ಸಿನ ಮರದ ಬೀಜವಾಗಿದೆ.

ಪ್ರತಿಯೊಬ್ಬ ವ್ಯಕ್ತಿಗೆ ತನ್ನದೇ ಆದ ಪ್ರಪಂಚ, ಲೋಕ,  ಆಲೋಚನೆ, ಜ್ಞಾನ,  ಮನೋಧರ್ಮ , ಅಭಿರುಚಿ,  ಮನಸ್ಥಿತಿ,  ದೈಹಿಕ ಗುಣಗಳು ಇರುತ್ತವೆ ಇವು ಇನ್ನೊಬ್ಬ ವ್ಯಕ್ತಿಗಿಂತ ಭಿನ್ನವಾಗಿರುತ್ತವೆ.

ಮನಸ್ಸಿನ ಸೆಳೆತ ಎಂದರೆ ಅತಿಂದ್ರೀಯ ಸೆಳವು ಮನಸ್ಸು ಒಂದು ಅಭ್ಯಾಸಗಳ ಮೂಟೆ ನಾವು ಹೇಗೆ ಅದನ್ನು ಪೋಷಿಸುತ್ತೇವೆ ಹಾಗೆ ಅದು ಬಯಕೆಗಳ ಸಂಗ್ರಹ. ಮನಸ್ಸು ಒಂದು ಮುಟ್ಟಿದರೆ ಮುನಿ ಗಿಡದ ಎಲೆ ಹಾಗೆ ಅದು ಬಹಳ ಚಂಚಲ ಮತ್ತು ಅರಿವು, ಬಯಕೆ, ಇಚ್ಛೆ ಇವು ಮನಸ್ಸಿನ ಮೂರು ಕಾರ್ಯಗಳು ಮನಸ್ಸು ಯಾವಾಗಲೂ ಯೋಚನೆ, ಯೋಜನೆ ಅದರ ಅನುಭವ ತಿಳಿದು ಕೊಳ್ಳಲು ಪ್ರಯತ್ನಿಸುವ ಒಂದು ಶಕ್ತಿ.

ಕುದುರೆ ಏರಿ ಹೊರಟ ರಾಜ

ಮನಸ್ಸು ಎಂಬ ಮಾಯದ ಕಾಡಿಗೆ

ಮಾತು ,ಆಲೋಚನೆ ,ಚಿಂತೆಗಳು

ತುಂಬಿದ ಮನುಷ್ಯನ ದೇಹದ ನಾಡಿಗೆ

ಸಿಲುಕಿದ ಮೋಹ ,ಕಾಮ ,ಕ್ರೋಧ ,ಮದ ,ಮತ್ಸರಗಳನ್ನು ಆಳುವ ಇಂದ್ರಿಯಗಳ ಚಕ್ರವ್ಯೂಹದ ಬಲೆಗೆ.

ತಿರುಗಿ ಬರಲು ಸಾಧ್ಯವಾಗದೆ

ಪ್ರಾಣವ ತೆತ್ತು ಕೊನೆಯಾದ ಜೀವನವೆಂಬ ಬದುಕಿಗೆ.

ಮನಸ್ಸೆ ಧರ್ಮ , ಮನಸ್ಸೆ ಮರ್ಮ ಮನಸ್ಸೆ ಕರ್ಮ.


ನಾವು ನಿದ್ರಾವಸ್ಥೆಯಲ್ಲಿ ಇದ್ದಾಗ ಮನಸ್ಸು ಪರದೆಯನ್ನು ತೆಗೆದ ದೇವರಾಗುತ್ತದೆ. ನಮ್ಮ ಭೌತಿಕ ದೇಹದ ಸೂಕ್ಷ್ಮ ರೂಪವೇ ಮನಸ್ಸು ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ದೇಹದಲ್ಲಿ ಸ್ರವಿಸುವ ಹಾರ್ಮೋನ್ ಗಳು ನಮ್ಮ ಮನಸ್ಸಿನ ಮೇಲೆ ಹಿಡಿತ ಸಾಧಿಸಿರುತ್ತವೆ. ಹಾರ್ಮೋನ್ ಗಳು ಮನಸ್ಸನ್ನು ಏರುಪೇರು ಮಾಡಿ ನಮ್ಮ ಮುಖ ಎಂಬ ಟಿವಿ ಪರದೆಯ ಮೇಲೆ ಪ್ರದರ್ಶಿಸುತ್ತವೆ. ನಾವು ಅಂದುಕೊಳ್ಳಬಹುದು ನಮ್ಮ ಆಲೋಚನೆಗಳಾದ ಕಾಮ ದುರಾಸೆ , ಅಸೂಯೆ, ಸೇಡು ಇವು ನಮಗೆ ಅಷ್ಟೇ ತಿಳಿದಿದೆ ಎಂದು ಮೂರ್ಖತನದಿಂದ ನಾವು ತಿಳಿದುಕೊಂಡಿರಬಹುದು.

ನಮ್ಮ ಕೆಟ್ಟ ಆಲೋಚನೆಗಳು ನಮ್ಮ ಮನಸ್ಸನ್ನು ಆಳಿ ವಿಷಕಾರಿ ರಾಸಾಯನಿಕಗಳನ್ನು ಬಿಡುಗಡೆ ಮಾಡಿ ನಮ್ಮನ್ನು ರೋಗಗ್ರಸ್ತನಾಗಿ ಮಾಡಿಬಿಡುತ್ತವೆ. ಮಾನಸಿಕ ಏರುಪೇರು ದೈಹಿಕ ಬದಲಾವಣೆ ತಂದು ಪ್ರಾಣವು ತಪ್ಪು ದಿಕ್ಕಿನಲ್ಲಿ ಹರಿಯುತ್ತದೆ. ನಮ್ಮ ಮನಸ್ಸು ನಾವು ತಿನ್ನುವ ಆಹಾರದಿಂದ ಉತ್ಪತ್ತಿಯಾಗುತ್ತದೆ. ನಾವು ಸೇವಿಸುವ ಆಹಾರ ಮೂರು ರೀತಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರಗಳು. ನಾವು ಸೇವಿಸುವ ಆಹಾರಗಳಾದ ಮಸಾಲೆಯುಕ್ತ ಪದಾರ್ಥಗಳು,  ಹುಳಿ ವಸ್ತುಗಳು, ಕರಿಬೇವು ಈರುಳ್ಳಿ, ಬೆಳ್ಳುಳ್ಳಿ, ಚಹಾ ,ವೈನ್ ಮೀನು , ಮಾಂಸ ಇತ್ಯಾದಿಗಳು ಭಾವದ್ರೇಕವನ್ನು ಉಂಟುಮಾಡುತ್ತವೆ. ಇವು ನಮ್ಮ ಭಾವನೆಗಳನ್ನು ಪ್ರಚೋದಿಸಿ ಮನಸ್ಸನ್ನು ಮಂಗನಂತೆ ಕುಣಿಸುತ್ತವೆ.

ಇಂತಹ ಒಂದು ಮಂಗನಂತೆ ಕುಣಿಯುವ ಮನಸ್ಸನ್ನು ನಿಯಂತ್ರಿಸಲು ಸಾಧಕರು ಪ್ರಾರ್ಥನೆ ಧ್ಯಾನ "ಓಂಕಾರ" ಪಠಣ ಮತ್ತು "ದೈವಿಕ ಗೀತೆಗಳು" ಹೇಳುವುದು ಅಭ್ಯಾಸಸುವುದರಿಂದ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬಹುದು.

ಮನಸ್ಸು ಎಂಬುದು ಧ್ಯಾನ

ಮನಸ್ಸು ಎಂಬುದು ಮೌನ

ಮನಸ್ಸು ಎಂಬುದು ಕವನ

ಮನಸ್ಸು ಎಂಬುದು ಭುವನ

ಮನಸು ಸತ್ತರೆ ಮರಣ

ಮನಸ್ಸಿನಲ್ಲಿ ಎರಡು ವಿಧಗಳಿರುತ್ತವೆ ಒಂದು ಶುದ್ಧ ಮನಸ್ಸು ಇನ್ನೊಂದು ಅಶುದ್ಧ ಮನಸ್ಸು ಅಶುದ್ಧ ಮನಸ್ಸು ನಮ್ಮನ್ನು ತಪ್ಪು ದಾರಿಗೆ ಎಳೆಯುತ್ತದೆ. ಅಶುದ್ಧ ಮನಸ್ಸನ್ನು ಶುದ್ಧೀಕರಿಸಲು ಏಕಾಂತ , ಮೌನ , ಸರಳ ಜೀವನ, ಉತ್ತಮ ಚಿಂತನೆ, ಪುಸ್ತಕಗಳ ಅಧ್ಯಯನ, ಮತ್ತು ಗುಣಮಟ್ಟದ ಚರ್ಚೆಗಳು,  ಮನಸ್ಸಿನ ಏಕಾಗ್ರತೆ, ಸಾಧುಸಂತರ ಸಂಬಂಧ,ಶುದ್ಧ ಮನಸ್ಸಿಗೆ ಸಹಾಯ ಮಾಡುತ್ತದೆ.

ನಮ್ಮ ಮನಸ್ಸನ್ನು ಧ್ಯಾನದ ಕಡೆ ಕೊಂಡೊಯಲು ನಾವು ಯಾವಾಗಲೂ "ಓಂ" ಅಥವಾ "ಅಹಂ ಬ್ರಹ್ಮಾಸ್ಮಿ "ಎಂಬ ಪದಗಳನ್ನು ನಮ್ಮ ಮನಸ್ಸಿನಲ್ಲಿ ಪ್ರತಿದಿನ 21, 600 ಬಾರಿ ಜಪ ಅಥವಾ ಪುನರಾವರ್ತನೆ ಮಾಡುವುದರಿಂದ ನಿಮ್ಮ ಮನಸ್ಸನ್ನು ಧ್ಯಾನ ಎಂಬ ಸಂಸ್ಕಾರದಡೆಗೆ ಸಾಧಿಸಬಹುದು.

ನಾವು ದಿನವೂ ಮಾಡುವ ಆಲೋಚನೆಗಳು ಮತ್ತು ಚಿಂತನೆಗಳು ನಮ್ಮನ್ನು ಒಳ್ಳೆಯದಾರಿ ಮತ್ತು ಕೆಟ್ಟದಾರಿಗೆ ಸಾಗಿಸುತ್ತವೆ. ಅವು ನಮ್ಮ ನೆನಪಿನ ಶಕ್ತಿಯಾಗಿ ನಮ್ಮನ್ನು ಕಾಡಲು ಶುರುಮಾಡುತ್ತವೆ. ನಮ್ಮ ಮನಸ್ಸನ್ನು ನಿಗ್ರಹಿಸಲು ಪ್ರಾಣಯಾಮಗಳನ್ನು ಮಾಡುವುದು. ಅವುಗಳು ನಮ್ಮನ್ನು ಏಕಾಗ್ರತೆ ಮತ್ತು ಧ್ಯಾನದ ಕಡೆ ಮನಸ್ಸು ನಡೆಯಲು ಸಹಾಯ ಮಾಡುತ್ತವೆ.

ಇಂದ್ರಿಯಗಳ ನಿಯಂತ್ರಣ ಅಂದರೆ ಆಹಾರ ನಿಯಂತ್ರಣ ಅಂದರೆ ನಮ್ಮ ದೇಹದಲ್ಲಿ ನಿಯಂತ್ರಣ ಮತ್ತು ಮನಸ್ಸಿನ ನಿಯಂತ್ರಣ ಇವುಗಳನ್ನು ಸರಿದೂಗಿಸಲು ಧ್ಯಾನ ಒಂದು ಮೂಲ ಮಂತ್ರ.

ಧ್ಯಾನ ಎಂದರೆ ಮನಸ್ಸಿನ ಮೌನ , ಸುಮ್ಮನೆ ಯಾವುದೇ ಅಡೆಚೆಣೆಗಳು ಇಲ್ಲದೆ ಸ್ಥಳದಲ್ಲಿ ಕುಳಿತು ನಿಮ್ಮ ಮನಸ್ಸನ್ನು ತನ್ನದೇ ಇಚ್ಚೆಗೆ , ಮೌನವಾಗಿರಲು  ಬಿಟ್ಟು ಕೆಲವು ಸಮಯದ ನಂತರ ಮನಸ್ಸು ಶಾಂತವಾಗುತ್ತದೆ ಹಾಗೂ ನಾವು ನಮ್ಮ ದಿನದ ಮನಸ್ಸಿನ ಚಟುವಟಿಕೆಗಳ ಮೇಲೆ ಆತ್ಮವಲೋಕನ ಮಾಡಿಕೊಳ್ಳುವುದು. ನಮ್ಮ ಮನಸ್ಸನ್ನು ಶುದ್ಧೀಕರಿಸಲು ಸಾತ್ವಿಕ ಆಹಾರ , ಉಪವಾಸ ಪ್ರಾಣಯಾಮ, ಸತ್ಸಂಗ ಮತ್ತು ಸ್ವಾಧ್ಯಾಯ ಮತ್ತು ಮನಸ್ಸಿನ ಧ್ಯಾನದಲ್ಲಿ ತೊಡಗಿಸುವುದರಿಂದ ನಮ್ಮಲ್ಲಿ ಮೂಡುವ ಕಾಮದ ಬಯಕೆಗಳನ್ನು ನಿಯಂತ್ರಿಸಬಹುದು. ಮನುಷ್ಯನಲ್ಲಿ ಮೂಡುವ ಲೈಂಗಿಕ ಬಯಕೆಗಳು ನಿಮ್ಮ ಮನಸ್ಸನ್ನು ಕೆಟ್ಟದಾರಿಗೆ ತಳ್ಳುತ್ತವೆ ಇದರ ನಿಯಂತ್ರಣ ಮನಸ್ಸನ್ನು ಶುದ್ಧವಾಗಿಡುತ್ತದೆ.

ಮನಸ್ಸನ್ನು ಶುದ್ಧೀಕರಿಸಲು ಈ ರೀತಿಯಾಗಿ ನಾವು ಮಾಡಬಹುದು

1 .ಒಳ್ಳೆಯದನ್ನು ಮಾಡಿ ಮತ್ತು ಆತ್ಮಾವಲೋಕನ ಮಾಡಿ

2. ಕೀರ್ತನೆ ಮಾಡಿ

3. ಯಾವಾಗಲೂ ದೇವರ ಬಗ್ಗೆ ಯೋಚಿಸಿ

4. ಪ್ರಾಣಾಯಾಮ ಅಭ್ಯಾಸ ಮಾಡಿ

5. ಸಾಮ ಮತ್ತು ದಮವನ್ನು ಅಭ್ಯಾಸ ಮಾಡಿ

6. ವೈರಾಗ್ಯವನ್ನು ಅಭಿವೃದ್ಧಿಪಡಿಸಿ

7. ಸಂತೋಷವನ್ನು ಹೊಂದಿರಿ

8. ಎಲ್ಲವನ್ನು ಬಂದಂತೆ ತೆಗೆದುಕೊಳ್ಳಿ

9. ಸತ್ಸಂಗವನ್ನು ಆಶ್ರಯಿಸಿ

10. ಸಂಕಲ್ಪಗಳನ್ನು ನಾಶ ಮಾಡಿ

11. ಅಹಂಕಾರಗಳನ್ನು ನಾಶ ಮಾಡಿ

12. ಮನಸ್ಸಿನೊಂದಿಗೆ ಜಗಳ ನಿಲ್ಲಿಸಿ

13. ವೈಫಲ್ಯಗಳು ನಿಮ್ಮನ್ನು ನಿರುತ್ಸಾಹಿ ಮಾಡಲು ಬಿಡಬೇಡಿ

14. ಮನಸ್ಸಿನ ಅಲೆದಾಟ ಪರಿಶೀಲಿಸಿ ಮತ್ತು ನಿಯಂತ್ರಿಸಿ

15. ಅಭ್ಯಾಸಗಳನ್ನು ಬದಲಾಯಿಸಿ

16. ಸಕಾರಾತ್ಮಕ ವಚನಗಳನ್ನು ಮಾಡಿ

ನಮ್ಮ ಮನಸ್ಸಿನಲ್ಲಿ ದೈವಿಕ ಶಕ್ತಿಯ ಜೊತೆ ರಾಕ್ಷಸ ಶಕ್ತಿ ಇರುತ್ತದೆ. ರಾಕ್ಷಸ ಶಕ್ತಿಯು ನಮ್ಮನ್ನು ತುಳಿಯಲು ಸಿದ್ಧವಾಗಿರುತ್ತದೆ ನಾವು ಇವುಗಳ ಮೇಲೆ ಅಂದರೆ ಮನಸ್ಸಿನ ಮೇಲೆ ಸವಾರಿ ಮಾಡಲು "ಓಂಕಾರ "ಮತ್ತು "ರಾಮನಾಮ" ಪಠಣ ಧ್ಯಾನ ಮಾಡುವುದರಿಂದ ನೀವು ದೈವತ್ವ ಕಾಣಬಹುದು  ಧ್ಯಾನ ಎಂದರೆ ಇನ್ನೊಂದು ಅರ್ಥದಲ್ಲಿ ಉಸಿರಾಟದ ನಿಯಂತ್ರಣ. ಧ್ಯಾನ ಮಾಡುವಾಗ ನಮ್ಮ ಉಸಿರನ್ನು ಗಮನಿಸುವುದರಿಂದ ನಾವು lಏಕಾಗ್ರತೆ ಹಾಗೂ ಮನಸ್ಸಿನ ಮೇಲೆ ಹತೋಟಿ ಸಾಧಿಸಬಹುದು.

ನಾವು ಈಗ ಧ್ಯಾನ ಮಾಡುವ ವಿಧಗಳನ್ನು ತಿಳಿಯೋಣ.

1. ಸಗುಣ ಧ್ಯಾನ- ಏಕಾಂತವಾಗಿ ಪದ್ಮಾಸನದ ಮೇಲೆ ಕುಳಿತು ಕಣ್ಣುಗಳನ್ನು ಮುಚ್ಚಿ ಸೂರ್ಯನಲ್ಲಿ ತೇಜಸ್ಸು ಚಂದ್ರನ ವೈಭವ ನಕ್ಷತ್ರಗಳ ವೈಭವ ಆಕಾಶದ ಸೌಂದರ್ಯ ಕುರಿತು ಧ್ಯಾನಿಸಿ

2. ನಿಗುಣ ಧ್ಯಾನ -ಜಗವು ಇಲ್ಲ ದೇಹವು ಇಲ್ಲ ಮನಸು ಇಲ್ಲ ಒಂದು ಚೈತನ್ಯ ಇದೆ ನಾನು ಪರಿಶುದ್ಧ ಎಂದು ಧ್ಯಾನಿಸುವುದು.

3. ಓಂ ಧ್ಯಾನ- ಓಂ ಅನ್ನು ನಿಮ್ಮ ಮುಂದೆ ಇರಿಸಿ ಇದರ ಮೇಲೆ ಗಮನ ಕೇಂದ್ರೀಕರಿಸಿ ತೆರೆದ ಕಣ್ಣುಗಳಿಂದ ತ್ರಾಟಕವನ್ನು ಮಾಡಿ ಕಣ್ಣೀರು ಧಾರಾಕಾರವಾಗಿ ಹರಿಯುವವರೆಗೆ ಕಣ್ಣು ಮಿಟುಕಿಸದೆ ಹಾಗೆ ಸ್ಥಿರವಾಗಿ ನೋಡುವುದು.

4. ಮನಸ್ಸಿನ ಮೇಲೆ ಧ್ಯಾನ- ಮನಸ್ಸನ್ನು ಬ್ರಹ್ಮನೆಂದು ಧ್ಯಾನಿಸುವುದು.

ಧ್ಯಾನ ಮಾಡುವುದು ಎಂದರೆ ಪದ್ಮಾಸನ, ಸಿದ್ದಾಸನ ಅಥವಾ ಸುಖಾಸನದ ಮೇಲೆ ಏಕಾಂತ ಸ್ಥಳದಲ್ಲಿ ಕುಳಿತು ಎಲ್ಲಾ ಭಾವನೆಗಳಿಂದ ಪ್ರಚೋದನೆಗಳಿಂದ ಮುಕ್ತಗೊಳಿಸಿ. ಇಂದ್ರಿಯಗಳನ್ನು ನಿಗ್ರಹಿಸಿ ವಸ್ತುಗಳಿಂದ ಮನಸ್ಸನ್ನು ಹಿಂತೆಗೆದುಕೊಳ್ಳಿ , ಮನಸ್ಸು ಶಾಂತವಾಗುತ್ತದೆ ಯಾವ ಆಲೋಚನೆ ಮಾಡಬೇಡಿ ನಿಧಾನವಾಗಿ ದೇವರ ಚಿಂತನೆಗಳು ನಿಮ್ಮ ಮನಸ್ಸಿನಲ್ಲಿ ಹರಿಯಬೇಕು ಧ್ಯಾನದಲ್ಲಿ ದೇವರ ಚಿತ್ರಣ ಶ್ಲೋಕ, ಸ್ತೋತ್ರಗಳು ಹೇಳುವುದರಿಂದ ಉತ್ತಮ ಲಾಭಗಳನ್ನು ಪಡೆಯಬಹುದು.

ಧ್ಯಾನದಿಂದ ಮನಸ್ಸು ಗಟ್ಟಿಯಾಗುತ್ತದೆ. ಚಂಚಲ ಮನಸ್ಸು ಸದೃಢವಾಗುತ್ತದೆ. ಧ್ಯಾನವು ಮನಸ್ಸಿಗೆ ಶಕ್ತಿ ನೀಡುತ್ತದೆ.


ಧ್ಯಾನದಿಂದ ಮನಸ್ಸಿಗೆ ಶಕ್ತಿ

ಮನಸ್ಸಿನಿಂದ ದೇಹದ ಭಕ್ತಿ

ದೇಹದ ಭಕ್ತಿಯಿಂದ ಇಂದ್ರಿಯಗಳ ನಿಗ್ರಹ ಯುಕ್ತಿ

ಇಂದ್ರಿಯಗಳ ನಿಗ್ರಹದಿಂದ ರಾಕ್ಷಸ ಗುಣಕ್ಕೆ ಮುಕ್ತಿ

ಶ್ರೀ ಸ್ವಾಮಿ ಶಿವಾನಂದ ಗುರುಗಳು ಬರೆದಿರುವ ಮನಸ್ಸು ಅದರ ರಹಸ್ಯಗಳು ಮತ್ತು ನಿಯಂತ್ರಣ ಎಂಬ ಪುಸ್ತಕದಲ್ಲಿ ಇನ್ನೂ ಹೆಚ್ಚಿನ ವಿವರಗಳನ್ನು ನಾವು ತಿಳಿಯಬಹುದು.

ನೀವೇ ಹೇಳಿ ಧ್ಯಾನದಿಂದ ಮನಸ್ಸನ್ನು ನಿಗ್ರಹಿಸಬಹುದೇ????

ಮನಸ್ಸು ಎಂಬ ಮರ್ಮ

ಅರಿಯಲು ಕಷ್ಟ ವರ್ಮ

ತಿಳಿಯಲು ಹೊರಟರೆ ಮನಸ್ಸಿನ ಧರ್ಮ

ಕೊನೆಗೂ ತಿಳಿಯದಾಯಿತು ಕರ್ಮ

ಧ್ಯಾನವನ್ನು ಮಾಡಿ ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸಿ ಶಾಂತ ಮತ್ತು ಸಂತೋಷದ ಜೀವನವನ್ನು ನಡೆಸಲು ನಾವು ಧ್ಯಾನದಿಂದ ತಯಾರಾಗೋಣವೇ.

********ಲೇಖಕರು********

ಡಾ. ಚಂದ್ರಶೇಖರ್. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35