ಮರೆತು ಬಿಡು ಗೋಳು

 


ಹುಟ್ಟು ನಿನ್ನದಲ್ಲ ಸಾವು  ನಿನಗೆ ಗೊತ್ತಿಲ್ಲ 

ಹುಟ್ಟು ಸಾವು ನಡುವೆ ಬದುಕ  ಪಡೆದೆಯಲ್ಲ 

ಸಾಗಬೇಕು ನೀನು ನಿನ್ನ ನೀನು ಅರಿತು 

ಕನಸು ಕಾಣಬೇಕು ದುಃಖವನ್ನು ಮರೆತು 

ಮೂರು ದಿನದ ಬಾಳು 

ಮರೆತು ಬಿಡು ಗೋಳು//ಪಲ್ಲವಿ//


ನಾಳೆ ಎಂಬ ನಿಜವ 

ಅರಿತು ಬಾಳು ಮನುಜ 

ಸೋಲು, ಗೆಲುವು ಎಲ್ಲ 

ಈ ಬದುಕಿನಲ್ಲಿ ಸಹಜ 


ಹಣದ ಆಸೆಗಾಗಿ ಮೋಸ ಮಾಡಬೇಡ 

ಹೆಣ್ಣ ಆಸೆಗಾಗಿ ನಿನ್ನನ್ನು ನಿ ಮರೆಯಬೇಡ 

ಮಣ್ಣು ಒಂದು ಮೋಹದ ಮಾಯೆ ನೋಡ 

ಹೆಣ್ಣು, ಹೊನ್ನು, ಮಣ್ಣಿಗಾಗಿ ಇಲ್ಲಿ ಯುದ್ಧ ನೋಡ


ದುಃಖದಿಂದ ನೀನು ಕಣ್ಣೀರು ಹಾಕಬೇಡ 

ಸಂತಸದಿಂದ ನೀನು ಜಗ್ಗಿ ಮೆರೆಯಬೇಡ 

ಈ ಆಸೆಯು ಒಂದು ನೀರ ಸುಳಿಯು ನೋಡ 

ಬಿದ್ದು ಬಿಟ್ಟು ನೀನು ಸುತ್ತಿ ಸಾಯಬೇಡ 


ನಾಳೆಗಾಗಿ ನಿನ್ನಲ್ಲಿ ಭರವಸೆಯೂ ಇರಲಿ 

ಇಂದಿಗಾಗಿ ನಿನ್ನಲ್ಲಿ ಸ್ವಲ್ಪ ಮರುಕ ಇರಲಿ 

ನೆನ್ನೆ ನಾಳೆಗಳ ಮಧ್ಯೆ ಇಂದು ನಗುತ ಇರಲಿ 

ನಾಳೆ ಚಿಂತೆಯಿಂದ ಈ ಬದುಕು ಸಾಯದಿರಲಿ 


ನಮ್ಮ ಆಳಿದವರು ಇಂದು ನೆನಪು ಮಾತ್ರ 

ಒಳಿತು ಅರಿತು ನಡೆವುದೇ ನಮ್ಮ ಬಾಳಸೂತ್ರ 

ಬದುಕು ಒಂದು ಹಾರುವ ಗಾಳಿಪಟ 

ಬಿರುಗಾಳಿಗೆ ಸಿಕ್ಕರೆ ಜೀವನ ಧೂಳಿಪಟ 


ನಾನು ನನ್ನದು ಶಾಶ್ವತ ಅಲ್ಲ ತಮ್ಮ 

ನಾವು ನಮ್ಮದು ಬಾಳು ತಿಳಿ ನೀ ತಿಮ್ಮ 

ಯಾರಿಗೆ ಯಾರು ಇಲ್ಲ ಅರಿತು ನಡೆ ಡುಮ್ಮ 

ಜೀವನ ಅರಿಯದ ಒಗಟು ಅಯ್ಯೋ ಮಂಕುತಿಮ್ಮ 


ಎಷ್ಟು ಕೂಡಿಟ್ಟರು ಅದು ಪರರ ಸ್ವತ್ತು 

ಈ ದಿನದ ಖುಷಿಯೆ ನಿನ್ನದೆಂಬ ತುತ್ತು

ಎಷ್ಟು ಇದ್ದರೇನು ಕಟ್ಟಬೇಕು ಮೂಟೆ 

ಇಲ್ಲಿ ಗೂಟ ಬಡಿದು ಇರಲು ಬಿಡುವುದೇ ಕರ್ಮದ ರಾಟೆ 


ಹುಟ್ಟು ನಿನ್ನದಲ್ಲ ಸಾವು ನಿನ್ನದಲ್ಲ 

ಹುಟ್ಟು ಸಾವು ನಡುವೆ ಬದುಕಬೇಕು ಎಲ್ಲಾ 

ಹುಟ್ಟು ಸಾವು ಇಲ್ಲಿ ಎಲ್ಲರಿಗೂ ಖಚಿತ 

ಮಧ್ಯ ಸಾಗುವ ಜೀವನ ಒಂದೇ ಪೂರ್ತಿ ಉಚಿತ

ಮೂರು ದಿನದ ಬಾಳು ಮರೆತು ಬಿಡು ಗೋಳು 


**********ರಚನೆ********** 

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ